ಮಾನವಕುಲಶಾಸ್ತ್ರ -
ಮಾನವಶಾಸ್ತ್ರದ ಒಂದು ಪ್ರಮುಖ ಶಾಖೆ; ಮಾನವ ಜನಾಂಗಗಳು ಮತ್ತು ಅವುಗಳ ಪರಸ್ಪರ ಸಂಬಂಧಗಳನ್ನೂ ವೈಲಕ್ಷಣ್ಯಗಳನ್ನೂ ಕುರಿತ ವೈಜ್ಞಾನಿಕ ಅಧ್ಯಯನ (ಎತ್ನಾಲಜಿ). ಪ್ರತಿಯೊಂದು ಜನಾಂಗವೂ ತನ್ನ ಅಸ್ತಿತ್ವದ ವಿವಿಧ ಹಂತಗಳಲ್ಲಿ ಬೇರೆ ಬೇರೆ ಜನಾಂಗದೊಡನೆ ಶಾರೀರಿಕ ಸಾಂಸ್ಕøತಿಕ ಸಂಪರ್ಕ ಪಡೆದಿದೆ. ಉದಾಹರಣೆಗೆ ಭಾರತೀಯರ ಜಾನಾಂಗಿಕ ವೈಲಕ್ಷಣ್ಯ ಹಾಗೂ ಸಾಂಸ್ಕøತಿಕ ಜೀವನವನ್ನು ಗಮನಿಸಿದಾಗ, ಇವರ ಸಂಸ್ಕøತಿ ದ್ರಾವಿಡ, ಮಂಗೋಲ, ಆರ್ಯ, ಮುಸ್ಲಿಮ್, ಯೂರೋಪಿಯನ್ ಮೊದಲಾದ ಸಂಸ್ಕøತಿಗಳಿಂದ ಪ್ರಭಾವಗೊಂಡು ಅವೆಲ್ಲವನ್ನೂ ತನ್ನಲ್ಲಿ ಅಳವಡಿಸಿಕೊಂಡು ಸಂಯುಕ್ತ ಅಥವಾ ಸಮ್ಮಿಶ್ರ ಸಂಸ್ಕøತಿ ಎನಿಸಿಕೊಂಡಿದೆ.

ಈ ಶಾಸ್ತ್ರವನ್ನು ವಾಸ್ತವಿಕವಾಗಿ ಸಾಂಸ್ಕøತಿಕ ಮಾನವಶಾಸ್ತ್ರವೆಂದು ಹೇಳುವವರುಂಟು. ಏಕೆಂದರೆ ಪ್ರಪಂಚದ ಬೇರೆ ಬೇರೆ ಸಂಸ್ಕøತಿಗಳ ತುಲನಾತ್ಮಕ ಅಧ್ಯಯನವೇ ಇದರ ಮುಖ್ಯ ಗುರಿ. ಈ ಅಧ್ಯಯನ ಶಾಖೆಯ ಆಸಕ್ತ ಸಂಶೋಧಕರು ವ್ಯಕ್ತಪಡಿಸಿರುವ ಮುಖ್ಯ ವಿಚಾರವಿದು; ಪ್ರಪಂಚದಲ್ಲಿ ಇಂದು ಶುದ್ಧ ಸಂಸ್ಕøತಿಗಳು ಅಸ್ತಿತ್ವದಲ್ಲಿ ಇಲ್ಲ; ಎಲ್ಲ ಸಂಸ್ಕøತಿಗಳೂ ಸಮ್ಮಿಶ್ರ ಸಂಸ್ಕøತಿಗಳಾಗಿವೆ.

ಮಾನವಕುಲಶಾಸ್ತ್ರಜ್ಞರು ಜಾನಾಂಗಿಕ ವೈಲಕ್ಷಣ್ಯಗಳನ್ನೂ ಸಾಂಸ್ಕøತಿಕ ಭಿನ್ನತೆಗಳನ್ನೂ ಬಲು ಎಚ್ಚರಿಕೆಯಿಂದ ಗಮನಿಸಿ ಅವುಗಳಲ್ಲಿಯ ಸಾಮ್ಯ ವೈಷಮ್ಯಗಳನ್ನು ನಿರ್ಧರಿಸಬೇಕು. ಸಂಸ್ಕøತಿಗೆ ಸಂಬಂಧಿಸಿದ ಮುಖ್ಯ ಅಂಶಗಳಾವುವು ಎಂಬುದನ್ನು ಖಚಿತಪಡಿಸಿಕೊಂಡಿರಬೇಕು. ಉದಾಹರಣೆಗೆ ಸಂಸ್ಕøತಿಯ ಒಂದು ಮುಖ್ಯ ಭಾಗ ವಿವಾಹ ವ್ಯವಸ್ಥೆ. ಇದು ಪ್ರಪಂಚದ ಎಲ್ಲ ಜನಾಂಗಗಳಲ್ಲೂ ಸಂಸ್ಕøತಿಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಆದ್ದರಿಂದ ವಿವಾಹ ವ್ಯವಸ್ಥೆಯ ತುಲನಾತ್ಮಕ ಅಧ್ಯಯನ ನಡೆಸುವುದು ಯುಕ್ತ. ಫ್ರೆಂಚರ, ಅರಬರ ಅಥವಾ ಭಾರತೀಯರ ವಿವಾಹ ವ್ಯವಸ್ಥೆಗಳನ್ನೇ ಮುಖ್ಯವಾಗಿಟ್ಟುಕೊಂಡು ಅವುಗಳಲ್ಲಿಯ ಸಾಮ್ಯ ವೈಷಮ್ಯಗಳನ್ನು ಪತ್ತೆ ಹಚ್ಚಬಹುದು.

ಈ ಶಾಸ್ತ್ರ ಇಪ್ಪತ್ತನೆಯ ಶತಮಾನದ ಆದಿಯಿಂದ ಪ್ರಗತಿಪಥದಲ್ಲಿ ಸಾಗಿದೆ. ಇಂದಿನ ದಿನಗಳಲ್ಲಿ ಸಂಸ್ಕøತಿಯ ವಿವಿಧ ವಿಭಾಗಗಳನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡುತ್ತಿರುವ ಉತ್ಸಾಹಿ ಸಂಶೋಧಕರು ಪ್ರಪಂಚದ ಎಲ್ಲೆಡೆ ಇದ್ದಾರೆ. ಇದರಿಂದ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ವಾಸವಾಗಿರುವ ಆದಿವಾಸಿಗಳ ಭಾಷೆ, ಜಾನಪದ, ಸಮಾಜ, ಸಂಸ್ಕøತಿ ಮುಂತಾದವನ್ನು ಕುರಿತ ಅಧ್ಯಯನ ಭರದಿಂದ ಸಾಗುತ್ತಿದೆ. ಈ ಶಾಸ್ತ್ರದ ವ್ಯಾಪ್ತಿ ಹಿರಿದಾಗುತ್ತಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ